ಗಜಲ್…
ಎದಿಯಾಗಿನ ನಾಡಿಯೊಳ್ಗ ನಿಂದೇ ಹೆಸ್ರ ಬಡಕೊಳ್ತಿದೆ ದೊರೆಸಾನಿ
ನಿನ್ ಎದಿಯೊಳ್ಗ ನನ್ ಪಿರುತಿ ಬಡಕೋಲಾಗ್ಯಾದ ದೊರೆಸಾನಿ
ನಿನ್ ದೋಸ್ತಿ ದೂರಾದ ಮ್ಯಾಲ ಮೆದುಳಿಗಿ ಮಬ್ ಹತ್ಯಾದ
ಮನ್ಸು ಬೇಗುದಿಯೊಳ್ಗ ಬೆಂದು ಗೋರಿಯಾಗ್ಯಾದ ದೊರೆಸಾನಿ
ನೀ ಬರ್ದ ಬರ್ದ ಕಳಿಸಿರೋ ಪ್ರೇಮದೋಲೆಗಳೀಗ ಕಾಡತಾವ
ಮನ್ಸು ಬಲೆಯೊಳ್ಗ ಸಿಕ್ಹಾಕಿಕೊಂಡು ಒದ್ಯಾಡತಾದ ದೊರೆಸಾನಿ
ನೀ ಅಪ್ಕೊಂಡು ಮುತ್ತಿಟ್ಟ ಶಂಭರ ನೆನಪಗೋಳ ಅದಾವ
ಮನ್ಸು ಬೆಂಕಿಯೊಳ್ಗ ಸುಟ್ಟು ಕರಕಲಾಗ್ಯಾದ ದೊರೆಸಾನಿ
ನೀ ಕೊಟ್ಟ ಗುಲಾಬಿ ಹೂವಾ ಅರಳಿಸಬೇಕಿತ್ ಬದುಕು
ಮನ್ಸು ಮುಳ್ಳಿನೊಳ್ಗ ನಲುಗಿ ಗಾಯಗೊಂಡಾದ ದೊರೆಸಾನಿ
ನೀ ಒಂದೂ ಮಾತಾಡದೇ ದಾಟಿಹೋದೆ ಹೊಸ್ತಿಲು `ಮೈನಾ’
ಮನ್ಸು ಹಂದರದೊಳ್ಗ ಹರವಾಗಿ ಕರಗಿಹೋಗ್ಯಾದ ದೊರೆಸಾನಿ
-ಮಹಿಪಾಲರೆಡ್ಡಿ ಸೇಡಂ