This is the title of the web page
This is the title of the web page

Live Stream

[ytplayer id=’22727′]

| Latest Version 8.0.1 |

Entertainment News

ಮೆದು ಭಾವದ ರುಬಾಯಿ

ಮೆದು ಭಾವದ ರುಬಾಯಿ

ರುಬಾಯಿಯ ವ್ಯಾಖ್ಯಾನ, ಸ್ವರೂಪ ಮತ್ತು ಲಕ್ಷಣಗಳು

ಭಾರತೀಯ ಹಿಂದಿ ಮತ್ತು ಉರ್ದು ಕವಿ, ಗೀತರಚನೆಕಾರ ಮತ್ತು ಸಂಭಾಷಣೆ ಬರಹಗಾರರಾಗಿದ್ದ ನಿಧಾ ಫಾಜಲಿ ಅವರು “ರುಬಾಯಿ ಒಂದು ಕಾವ್ಯ ಪ್ರಕಾರದ ಹೆಸರು. ರುಬಾಯಿ ಅರೇಬಿಕ್ ಪದ ‘ರುಬಾ’ದಿಂದ ಬಂದಿದೆ. ‘ರುಬಾ’ ಎಂದರೆ ನಾಲ್ಕು. ರುಬಾಯಿ ನಾಲ್ಕು ಸಾಲಿನ ಕವಿತೆಯಾಗಿದ್ದು, ಇದರ ಮೊದಲ ಎರಡನೆಯ ಮತ್ತು ನಾಲ್ಕನೆಯ ಮಿಸ್ರಾಗಳು ಪ್ರಾಸದಿಂದ ಕೂಡಿದ್ದು, ಮೂರನೆಯ ಮಿಸ್ರಾ ಪ್ರಾಸದಿಂದ ಮುಕ್ತವಾಗಿರಬಹುದು” ಎನ್ನುತ್ತಾರೆ. ಪ್ರತಿ ರುಬಾಯಿಯು ಸ್ವತಂತ್ರ ಮತ್ತು ಸಂಪೂರ್ಣ ಅರ್ಥ ನೀಡುತ್ತದೆ. ನಾಲ್ಕನೆಯ ಮಿಸ್ರಾ ಆತ್ಮವಿದ್ದು, ಉಳಿದ ಮೂರು ಮಿಸ್ರಾಗಳು ದೇಹವಿದ್ದಂತೆ. ಇದು ಪರ್ಷಿಯನ್ ಭಾμÉಯ ಅತ್ಯಂತ ಜನಪ್ರಿಯ ಸಾಹಿತ್ಯ ಪ್ರಕಾರ. ಇದನ್ನು ಪರ್ಷಿಯನ್ ಭಾμÉಯಲ್ಲಿ ‘ತರಾನಾ’ ಎಂತಲೂ ಕರೆಯುತ್ತಾರೆ. ಕಾರಣ, ರುಬಾಯಿ ಮೂಲತಃ ಹಾಡುಗಬ್ಬದ ಕಾವ್ಯ ಪ್ರಕಾರ. ಪೌಲ್ ಸ್ಮಿತ್ ರವರು ರುಬಾಯಿ ಕುರಿತು ಈ ರೀತಿಯಲ್ಲಿ ಹೇಳಿದ್ದಾರೆ. “The Rubai is a poem of four lines in which usually the First, Second and the Fourth lines Rhyme and sometimes with the Radhif after the Rhythm words.. sometimes all four Rhythm”. ಇದು ಫಾರಸಿ, ಉರ್ದು, ಹಿಂದಿ ಶಾಯರ್ ಗಳಿಗೆ ತಮ್ಮ ಆಲೋಚನೆ ಹಾಗೂ ತತ್ವಗಳ ಚಿಂತನೆಗಳ ಅಭಿವ್ಯಕ್ತಿಗೆ ಉತ್ತಮ ವಾಹಕವಾಗಿದೆ. ನೀತಿ, ಉಪದೇಶ ಮತ್ತು ವೇದಾಂತ ವಿಷಯಗಳಿಗೆ ಹೆಚ್ಚು ಸೂಕ್ತ ಎನ್ನಲಾಗಿದೆಯಾದರೂ ಮನುಷ್ಯನ ಭಾವನೆಗಳ ಕಾಮನಬಿಲ್ಲನ್ನೇ ಇಲ್ಲಿ ಗಮನಿಸಬಹುದು. ಇದು ಧರ್ಮ ಮತ್ತು ಜಾತಿಯ ವಲಯವನ್ನು ಮೀರಿ ಸಾಮರಸ್ಯದ ಬೆಳಕನ್ನು ಹರಡುತ್ತದೆ. ಜಾಗೃತ ಜನರ ಜಗತ್ತಿನಲ್ಲಿ, ಅವನು ಹಿಂದೂ ಅಥವಾ ಮುಸ್ಲಿಮನಲ್ಲ, ಅವನು ಕೇವಲ ಮನುಷ್ಯ ಎಂಬುದನ್ನು ರುಬಾಯಿ ಸಾರುತ್ತದೆ. ಒಂದು ರುಬಾಯಿ ಒಂದೇ ವಿಷಯವನ್ನು ಕುರಿತದ್ದಾಗಿರಬೇಕು. ಒಂದಕ್ಕಿಂತ ಹೆಚ್ಚು ವಿಷಯವನ್ನು ಇದರಲ್ಲಿ ತುರುಕುವಂತಿಲ್ಲ, ತುರುಕಬಾರದು. ಇದರೊಂದಿಗೆ ಇನ್ನೊಂದು ಗಮನಿಸಬೇಕಾದ ಮುಖ್ಯ ಅಂಶವೆಂದರೆ ವಿಷಯ ರುಬಾಯಿಯಿಂದ ರುಬಾಯಿಗೆ ಮುಂದುವರಿಯುವಂತಿಲ್ಲ, ಮುಂದುವರಿಯಲೂ ಬಾರದು. ಒಂದೊಂದು ರುಬಾಯಿ ಒಂದೊಂದು ಸಂಪೂರ್ಣ ಕಾವ್ಯದ ರೂಪದಲ್ಲಿ ಇರುತ್ತವೆ. ಸಾಧಾರಣವಾಗಿ ಇದರ ಒಂದೊಂದು ಮಿಸರೈನ್ ಸ್ವತಂತ್ರವಾಗಿ ಇರುತ್ತವೆ, ಇರಬೇಕು ಕೂಡ.

ರುಬಾಯಿಯು ನಾಲ್ಕು ವೃತ್ತಾಕಾರದ ಹಂತಗಳನ್ನು ಹೊಂದಿದೆ. ಕಸಿದಾ ಅಥವಾ ಗಜಲ್ ನ ಮೊದಲ ನಾಲ್ಕು ಮಿಸರೈನ್, ಅಂದರೆ ಎರಡು μÉೀರ್ ಸೇರಿ ರುಬಾಯಿ ಆಗಬಹುದು. ಛಂಧೋನಿಯಮದ ಪ್ರಕಾರ ಇದೊಂದು ಅಕ್ಷರಗಣ ಆಧಾರಿತ ಕಾವ್ಯ. ಈ ನೆಲೆಯಲ್ಲಿ ಸಮಾನ ಮಾತ್ರೆ ಇರುತ್ತವೆ. ನಾವು ಇಂದು ಮಾತ್ರೆಯ ಬದಲಿಗೆ ಸಮಾನ ಅಕ್ಷರಗಳನ್ನು ಬಳಸುತ್ತಿದ್ದೇವೆ. ಪರ್ಷಿಯನ್ ರುಬಾಯಿ ವಿಶೇಷವಾದ ಮೀಟರ್‍ಗಳನ್ನು ಹೊಂದಿದ್ದು ಅದನ್ನು ಉರ್ದುವಿನಲ್ಲೂ ಅನುಸರಿಸಲಾಗುತ್ತದೆ. ಇತ್ತೀಚೆಗೆ ಮುಕ್ತತೆಯ ಮೋಹದಲ್ಲಿ, ಮುರಿದು ಕಟ್ಟುವ ಭರದಲ್ಲಿ ಮೂಲಕ್ಕೆ ಅಪಚಾರವೆಸಗುತ್ತಿರುವುದೆ ಹೆಚ್ಚು. ಮೂಲದಲ್ಲಿ ರುಬಾಯಿಯ ಪ್ರತಿ ಮಿಸ್ರಾಗಳಲ್ಲಿ 4 ಗಣಗಳು ಬರುತ್ತವೆ. ಅವುಗಳೆಂದರೆ….

1 ತಗಣ(–ಣ), 1 ಯಗಣ(ಣ–) 2 ಸಗಣ(ಣಣ-) ಮತ್ತು 1 ಮಗಣ(—) ಇದರೊಂದಿಗೆ ರುಬಾಯಿಯನ್ನು 24 ಬೆಹರ್ ನಲ್ಲೂ ಬರೆಯಬಹುದು. ಖಯ್ಯಾಮಗಿಂತ ಮುಂಚೆ ಅವಿಸೆನ್ನಾ(980-1037) ಮೊದಲಾದ ಒಬ್ಬಿಬ್ಬರು ಕವಿಗಳು ಇದನ್ನು ಬಳಸಿರುವುದನ್ನು ಗಮನಿಸುತ್ತೇವೆ. 24 ಬೆಹರ್ ನಲ್ಲಿ ವಿಶೇಷವಾಗಿ ‘ಬೆಹರ್-ಎ-ಹಜಜ್’ ಮೀಟರ್ ನಲ್ಲಿ ಹೆಚ್ಚು ಬರೆಯಲಾಗುತ್ತದೆ. ಅವುಗಳಲ್ಲಿ ಕೆಲವೊಂದನ್ನು ಇಲ್ಲಿ ಗಮನಿಸಬಹುದು.
01. ಮುತಕಾರಿಬ್ ಮುಸಮ್ಮನ್ ಅಸ್ರಾಮ್
02. ರಜಜ್ ಮುಸಮ್ಮನ್ ಸಾಲೀಮ್
03. ಮುತದಾರೀಕ್ ಮುಸಮ್ಮನ್ ಮುಜಾಹಿಫ್
04. ರಮಲ್ ಮುಸಮ್ಮನ್ ಮುಜಾಹಿಫ್
ಇದರಲ್ಲಿ ಮೊದಲನೆಯ, ಎರಡನೆಯ ಹಾಗೂ ನಾಲ್ಕನೆಯ ಮಿಸರೈನ್ ಸಮವಾಗಿದ್ದು ಪ್ರಾಸ ಅನುಪ್ರಾಸ (ಕಾಫಿಯಾದ ಮಾದರಿಯಲ್ಲಿ, ರದೀಫ್ ಐಚ್ಛಿಕ) ಹೊಂದಿರುತ್ತವೆ. ಮೂರನೆಯ ಮಿಸ್ರಾ ಪ್ರಾಸದಿಂದ ಮುಕ್ತವಾಗಿರುತ್ತದೆ.

ಕೆಲವೊಮ್ಮೆ ಎಲ್ಲ ಮಿಸ್ರಾಗಳಲ್ಲಿ ಅಂತ್ಯ ಪ್ರಾಸ (ಕಾಫಿಯಾದ ಮಾದರಿಯಲ್ಲಿ) ಬರುತ್ತವೆ, ಆದರೆ ಅದು ಉತ್ತಮ ಕ್ರಮವಾಗಲಾರದು. ಇಲ್ಲಿ ನಾಲ್ಕನೆಯ ಮಿಸ್ರಾ ಮಾತ್ರ ವಿಶೇಷ ಅಭಿಪ್ರಾಯವುಳ್ಳದ್ದು, ಸ್ಪೂರ್ತಿದಾಯಕವಾಗಿರಬೇಕು. ಇಡೀ ರುಬಾಯಿಗೆ ಕಳೆ ಕಟ್ಟುವಂತೆ ಇರಬೇಕು. ರುಬಾಯಿಯ ಮೊದಲ ಮಿಸ್ರಾ ಪ್ರತ್ಯೇಕವಾಗಿ ಸಾಗುತ್ತ ನಾಲ್ಕನೆಯ ಮಿಸ್ರಾದಲ್ಲಿ ತಂಗಾಳಿಯಂತೆ ಸೇರಿಕೊಳ್ಳುತ್ತದೆ. ಪ್ರಸಿದ್ಧ ಫಾರಸಿ ಕವಿ ಸಾಯಬ್ ರುಬಾಯಿ ಕುರಿತು ಹೀಗೆ ಮನಮೋಹಕವಾಗಿ ಹೇಳಿದ್ದಾರೆ. “ರುಬಾಯಿಯ ಮೊದಲ ಎರಡು ಮಿಸ್ರಾಗಳು ಪ್ರೇಮಿಯ ಎರಡು ಕಣ್ಣು ರೆಪ್ಪೆಗಳಾದರೆ, ಮೂರನೆಯ ಹಾಗೂ ನಾಲ್ಕನೆಯ ಮಿಸ್ರಾಗಳು ಪ್ರೇಮಿಯ ಒದ್ದೆಯಾದ ಚಿಗುರು ಮೀಸೆ.” ಈ ಹಿನ್ನೆಲೆಯಲ್ಲಿ ರುಬಾಯಿಯ ಸೌಂದರ್ಯ ಮೂರನೆಯ ಹಾಗೂ ನಾಲ್ಕನೆಯ ಮಿಸರೈನ್ ತುಂಬಾ ಹೊಳೆಯುತ್ತದೆ ಮತ್ತು ಈ ಮಿಸರೈನ್ ಓದುಗರ ಮನಸೂರೆಗೊಳ್ಳುತ್ತವೆ. ಮೊದಲ ಮೂರು ಮಿಸರೈನ್ ವಿಷಯದ ಮಂಡನೆಗೆ ಕಟ್ಟಡ ಅಥವಾ ಕುಂದಣದಂತಿದ್ದರೆ, ಕೊನೆಯ ಮಿಸ್ರಾದಲ್ಲಿ ಆದರ ಅರ್ಥಗೌರವ ಅಂದರೆ ಶಾಯರನ ಉದ್ದೇಶಿತ ಆಶಯ ಅಥವಾ ಸಂದೇಶ, ಕತ್ತಲಲ್ಲಿ ಬೆಳಕು ಮಿಂಚಿದಂತೆ ಧುತ್ತೆಂದು ತೆರೆದುಕೊಂಡು ಓದುಗರನ್ನು ಚಕಿತಗೊಳಿಸಬೇಕು. ಈ ಹಿನ್ನೆಲೆಯಲ್ಲಿ ರುಬಾಯಿ ಜೀವನ ಹೇಗೆ ಜೀವಿಸಬೇಕೆಂಬ ರೀತಿ-ನೀತಿಯನ್ನು ಕಲಿಸುತ್ತದೆ ಎನ್ನಬಹುದು. ಮನಸನ್ನು ಹದಗೊಳಿಸುವ, ಮುದಗೊಳಿಸುವ ಕಾರ್ಯವನ್ನು ರುಬಾಯಿ ಮಾಡುತ್ತದೆ, ಮಾಡಬೇಕು ಕೂಡ.

ಯಾವುದೇ ಭಾಷೆಯಲ್ಲಿರುವ ಕಾವ್ಯ ಶೈಲಿಯ ಅನುಕರಣೆ ಮತ್ತೊಂದು ಭಾಷೆಯಲ್ಲಿ ಒಡಮೂಡಿಸುವುದು ಪ್ರಯಾಸದ ಕೆಲಸ. ಪ್ರತಿಯೊಂದು ಭಾಷೆಗೆ ತನ್ನದೇ ಆದ ಒಂದು ವಿಶಿಷ್ಟ ಹಾಗೂ ಯೂನಿಕ್ ಸ್ವಭಾವವಿರುತ್ತದೆ. ಅದನ್ನು ಗ್ರಹಿಸಿಕೊಂಡೇ ಅನ್ಯ ಭಾಷೆಯಲ್ಲಿ ‘ಅನುಕರಣೆ’ಯತ್ತ ಹೆಜ್ಜೆ ಹಾಕಬೇಕಾಗುತ್ತದೆ. ಹಾಗಂತ ಕೇವಲ ಶಾಸ್ತ್ರ ತಿಳಿದರೆ ಸಾಲದು, ಅದಕ್ಕೆ ಸತತ ಪ್ರಯತ್ನ ಮಾಡುತ್ತ ಸಾಗಿದರೆ, ಯಶಸ್ಸು ದೊರೆಯುವುದು. ಈ ಸಂದರ್ಭದಲ್ಲಿ ಕನ್ನಡದ ಕವಿಗಳು ‘ರುಬಾಯಿಯಾತ್’ ರಚನೆಯಲ್ಲಿ ಸಿದ್ದಿ ಸಾಧಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಇದೊಂದು ಚಲಿಸುವ ಸುಂದರ ಗೀತೆ, ಭಾವನೆಗಳ ಮುಖಾಮುಖಿಯಾಗುವ ಅವಸ್ಥಾಭಾವವೇ ರುಬಾಯಿ. ಇರಾನಿನ ಮೂಲದ ರುಬಾಯಿ ಉರ್ದು ಸಾಹಿತ್ಯದ ಕಾವ್ಯ ಕುಸುಮ. ಫಾರಸಿ ಕವಿಗಳ ಹೃದಯದ ಪ್ರೇಮ ರಸಧಾರೆ. ಈ ಪರಪಂಚದಲ್ಲಿ ಹೆಣ್ಣಿಗೆ ಸೋಲದ ಮನುಷ್ಯ ಇಲ್ಲವೆಂದೇ ಹೇಳಬಹುದು. ಅದರಲ್ಲೂ ಹೆಣ್ಣಿನಂತೆ ಮೋಹಕ, ಮಿದುವಾಗಿರುವ ಸಾಹಿತ್ಯ ಓದಲು, ಬರೆಯಲು ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ? ಈ ದಾರಿಯಲ್ಲಿ ‘ರುಬಾಯಿ’ ಹೃದಯವಂತರ ಹೃದಯವನ್ನು ಕದ್ದು ಬಿಟ್ಟಿದೆ, ಇದರ ಅರ್ಥವೂ ‘ಕಳವು’ ಎಂಬುದಿದೆ ಎಂಬುದನ್ನು ನಾವು ಮರೆಯುವಂತಿಲ್ಲ. ಜಲಾಲುದ್ದೀನ್ ರೂಮಿಯವರ ಈ ರುಬಾಯಿ ಯಾರಾದರೂ ಇಷ್ಟ ಪಡದೆ ಇರಲಾದೀತೆ?

“ಗಂಧರ್ವರ ಮುಕ್ತಿ ನಿಜ ಅರಿವಿನಿಂದ
ಪಶುವಿಗೆ ಮೋಕ್ಷ ಶುದ್ಧ ಅಜ್ಞಾನದಿಂದ
ಮನುಷ್ಯ ಇವೆರೆಡರ ನಡುವೆ
ಒಮ್ಮೆ ಉತ್ತುಂಗಕ್ಕೆ, ಮತ್ತೊಮ್ಮೆ ರಸತಾಳಕ್ಕೆ..”

ಆಕರ ಗ್ರಂಥಗಳು
01. ಲಕ್ಕೂರು ಆನಂದ (ಅನು)= ಡಾ. ಹರಿವಂಶರಾಯ್ ಬಚ್ಚನ್ ಮಧುಶಾಲೆ
02. ಡಾ.ಕೆ.ಬಿ.ಬ್ಯಾಳಿ = ಮಧು ಮಂದಿರ
03. ಡಾ.ಕೆ.ಬಿ.ಬ್ಯಾಳಿ (ಅನು) = ಕನ್ನಡಕ್ಕೆ ರುಬಾಯಿಗಳು
04. ಡಾ.ಕೆ.ಬಿ.ಬ್ಯಾಳಿ (ಅನು) = ಉಮರನ ಆಧ್ಯಾತ್ಮದಂಗಡಿಯ ರುಬಾಯಿಗಳು
05. ಶಾ.ಬಾಲುರಾವ್ (ಅನು) = ಉಮರ ಸಂದೇಶ
06. ಡಿ.ವಿ.ಜಿ. = ಉಮರನ ಒಸಗೆ
07. ಫಿರಾಕ ಗೋರಕಪುರಿ = ರೂಪ್
08. ರಾಘವೇಂದ್ರ ರಾವ್ = ಉರ್ದು ಮತ್ತು ಫಾರಸಿ ಸಾಹಿತ್ಯ
09. ಡಾ.ಪ್ರಭು ಖಾನಾಪುರೆ = ಶಾಂತರಸ
10. ಅಂತರ್ಜಾಲ ಮಾಹಿತಿ

ರತ್ನರಾಯಮಲ್ಲ
ಡಾ. ಮಲ್ಲಿನಾಥ ಎಸ್.ತಳವಾರ
ಕನ್ನಡ ಪ್ರಾಧ್ಯಾಪಕರು,
ನೂತನ ಪದವಿ ಮಹಾವಿದ್ಯಾಲಯ,
ಕಲಬುರಗಿ 585 103
(99863 53288)


Jana Dhwani
the authorJana Dhwani