“ಪಥಿಕ ಪ್ಯಾರಸೆ ಪೀನಾ ಇಸಕೊ
ಫಿರ್ ನ ಮಿಲೇಗಿ ಮಧುಶಾಲಾ”
-ಹರಿವಂಶರಾಯ್ ಬಚ್ಚನ್
ಕನ್ನಡ ಭಾಷೆಯ ಉಗಮದೊಂದಿಗೆ ಇದರ ಪರಂಪರೆಯನ್ನು ಗಮನಿಸಿದಾಗ ಕನ್ನಡ ಸಾರಸ್ವತ ಲೋಕವು ತನ್ನ ಹೃದಯದ ಕಿಟಕಿ ಬಾಗಿಲುಗಳನ್ನು ತೆರೆದುಕೊಂಡೆ ಇರುವುದು ನಮ್ಮ ಅರಿವಿಗೆ ಬರುತ್ತದೆ. ಎಲ್ಲಿಂದಲಾದರೂ ಬರುವ ಬೆಳಕನ್ನು ಧಾರಾಳವಾಗಿ ಸ್ವೀಕರಿಸುವ ಹಾಗೂ ಅದನ್ನು ನಮ್ಮದಾಗಿಸಿಕೊಳ್ಳುವ ಹೃದಯ ವೈಶಾಲ್ಯತೆ ಕನ್ನಡ ಭಾಷೆಗೆ ಇರುವುದು ಜಗಜ್ಜಾಹೀರು. ಇದರಿಂದ ಸಾಂಸ್ಕøತಿಕ ಅಂಶಗಳ ಕೊಡು-ಕೊಳ್ಳುವಿಕೆ ಸಶಕ್ತವಾಗಿಯೆ ನಡೆಯುತ್ತದೆ. ಇಡೀ ಅವನಿಯನ್ನು ಬೆಸೆದ ಬಹುಮುಖ ಸಂಸ್ಕೃತಿ ಓದುಗರದ್ದಾಗುತ್ತದೆ. ಇದರಿಂದ ಭಿನ್ನತೆಯಲ್ಲಿ ಏಕತೆಯನ್ನು ಮತ್ತು ಸಂವಿಧಾನಿಕ ಒಕ್ಕೂಟ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಈ ನೆಲೆಯಲ್ಲಿ ಜೀವನದ ಅನುಭೂತಿಯೆ ಕಾವ್ಯ. ಅಂತೆಯೇ ಕಾವ್ಯ ಘನವಾದ ವರ್ತಮಾನವನ್ನು ಸೃಷ್ಟಿಸುತ್ತಲೇ, ಭವಿಷ್ಯದ ಕನಸು ಕಂಡು ಬದುಕುತ್ತಿರುವವರ ಕುರಿತು ಬರೆಯುವುದಾಗಿದೆ.
ಕವಿ-ಕಲ್ಪನೆಯ ಸಾರ್ವಜನಿಕತೆಯೇ ಕವಿಯ ಕಾವ್ಯವನ್ನು ವ್ಯಕ್ತಿಗತ ಪರಿಧಿಯಿಂದ ಹೊರ ತಂದು ಎಲ್ಲರಿಗೂ ಸಹಾನುಭೂತಿಯನ್ನು ಮೂಡಿಸುತ್ತದೆ. ಕಾವ್ಯದ ಮೂಲ ಉದ್ಧೇಶವೇ ಆನಂದವನ್ನು ಹಂಚುವುದಾಗಿದೆ. ಕವಿಯ ಅಂತಃಕರಣ ಬದುಕಿನ ಬಗೆಗೆ ಏನನ್ನು ಹೇಳುತ್ತದೆ ಎನ್ನುವುದೇ ಕಾವ್ಯದ ವಾಸ್ತವಿಕ ಹಾಗೂ ನಿಜವಾದ ಪರಿಚಯವಾಗಿದೆ. ಈ ಹಿನ್ನೆಲೆಯಲ್ಲಿ ಅನ್ಯ ಭಾಷೆಯ ಒಂದು ಕಾವ್ಯ ಪ್ರಕಾರವನ್ನು ಮತ್ತೊಂದು ಭಾಷೆಗೆ ತರುವುದು ಅಷ್ಟು ಸುಲಭ ಸಾಧ್ಯವಲ್ಲ. ಒಂದು ಭಾಷೆಯಲ್ಲಿ ಒಂದು ಪದ ಉದ್ಭವಿಸಬೇಕಾದರೆ ಅದಕ್ಕೆ ಅದರದ್ದೇ ಆದ ಒಂದು ಪರಂಪರೆ ಇರುತ್ತದೆ. ಆ ಭಾಷೆ ಉಸಿರಾಡುವ ಜನಾಂಗ ಮತ್ತು ಅವರ ಸಂಸ್ಕøತಿಯ ಗರ್ಭದಿಂದ ಜನಿಸಿದ ಶಬ್ದವೊಂದು ಮತ್ತೊಂದು ಭಾಷೆಯಲ್ಲಿ ಸಶಕ್ತವಾಗಿ ಬಳಸುವುದು ಎಂದರೆ ಅಸಾಧ್ಯವಾದ ಮಾತೇ ಸರಿ. ಇದು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ಆ ಭಾಷೆಯ ರಚನಾತ್ಮಕ ಪದ್ಧತಿಯಿಂದ ಕಾವ್ಯ ರೂಪವೊಂದು ದೇಹ ಪಡೆಯುತ್ತದೆ. ಛಂದಸ್ಸು, ವಾಕ್ಯ ರಚನೆ, ವ್ಯಾಕರಣ, ಜನಾಂಗವೊಂದರ ಸಂಸ್ಕøತಿಯ ವಿವಿಧ ಆಯಾಮಗಳಿಂದ ಮುನ್ನೆಲೆಗೆ ಬಂದ ಕಾವ್ಯ ಪ್ರಕಾರವೊಂದನ್ನು ಅನ್ಯ ಸಂಸ್ಕøತಿ, ಆಚಾರ, ವಿಚಾರವಿರುವ ಭಾಷೆಯಲ್ಲಿ ರೂಢಿಸಿಕೊಳ್ಳುವುದೆಂದರೆ ಬದ್ಧತೆಯ ಗಣಿಯೆಂದೇ ಕರೆಯಬಹುದು. ಈ ನಿಟ್ಟಿನಲ್ಲಿ ಕವಿಯ ಧರ್ಮ, ತತ್ವ ನಿರೂಪಣೆಯ ವಿಷಯ ತುಂಬಾ ಮುಖ್ಯವಾದದ್ದು. ಏಕೆಂದರೆ ಅವರ ಹೃದಯದಲ್ಲಿ ಅಡಗಿರುವುದು ಒಂದು ಜೀವವಲ್ಲ, ಬದಲಿಗೆ ನೂರಾರು ಜೀವಗಳು. ಅವರ ಕಂಠದಿಂದ ಹೊರಟು ಬರುವುದು ಒಂದು ಅನುಭವದ ಧ್ವನಿಯಲ್ಲ, ನೂರಾರು ಅನುಭವಗಳ ಪ್ರತಿಧ್ವನಿ. ಈ ಕಾರಣಕ್ಕಾಗಿಯೇ ಕಾವ್ಯ – ಜೀವನ ಹೇಗೆ ಜೀವಿಸಬೇಕೆಂಬ ರೀತಿ-ನೀತಿ ಕಲಿಸುತ್ತದೆ. ಜೊತೆಗೆ ಕಾವ್ಯ ಮನಸನ್ನು ಹದಗೊಳಿಸುತ್ತದೆ, ಮುದಗೊಳಿಸುತ್ತದೆ. “Brevity is the soul of wit” ಎಂಬ ವಿಲಿಯಂ ಷೇಕ್ಸ್ ಪಿಯರ್ ಹೇಳಿದ ಸಂಕ್ಷಿಪ್ತತತೆಯು ಕಲೆಯ ಜೀವಾಳ ಎಂಬುದು ಇಂದು ಹೆಚ್ಚು ಹೆಚ್ಚು ಮುನ್ನೆಲೆಗೆ ಬರುತ್ತಿದೆ. ಪ್ರತಿಯೊಂದು ಕಾವ್ಯ ರೂಪವೂ ಅನನ್ಯವೆ. ಯಾವುದನ್ನು ಯಾವುದಕ್ಕೂ ಹೋಲಿಸಲಾಗದು. ಪ್ರಪಂಚದ ಯಾವ ಮೂಲೆಯಲ್ಲಿ ಜನಿಸಿದರೂ ಸಹೃದಯ ಓದುಗರ ಮನ ಗೆದ್ದ ಸಾಹಿತ್ಯ, ಬರಹ ಜೀವಂತವಾಗಿರುತ್ತದೆ, ಕಾಲಾತೀತವಾಗಿ, ಭಾಷಾತೀತವಾಗಿ ನಿಲ್ಲುತ್ತದೆ. ಇದಕ್ಕೆ ‘ಅನುವಾದ’ವು ಒಂದು ಸಾಧನವಾಗಿ, ಸೇತುಬಂಧವಾಗಿ ಕಾರ್ಯನಿರ್ವಹಿಸುತ್ತದೆ. ಅಂತೆಯೇ ಅನುವಾದದ ಹೊರತು ಯಾವ ಒಂದು ಕೃತಿಯೂ ರಾಷ್ಟ್ರೀಯ ಕೃತಿಯಾಗಲು ಸಾಧ್ಯವಿಲ್ಲ, ಹಾಗಂತ ಅದು ಕೇವಲ ಅನುವಾದದಲ್ಲಿಯೇ ಉಳಿಯಬಾರದು. ಆ ಸಾಹಿತ್ಯದ ಸ್ವರೂಪ, ಲಕ್ಷಣಗಳೊಂದಿಗೆ ಸ್ವತಂತ್ರ ರಚನೆಯತ್ತ ಮುಖ ಮಾಡಿ ನಿಲ್ಲಬೇಕು. ಈ ನೆಲೆಯಲ್ಲಿ ಆರಂಭದಲ್ಲಿ ಭಾಷಾಂತರದಿಂದ ಕನ್ನಡಕ್ಕೆ ಪ್ರವೇಶಿಸಿದರೂ ಇಂದು ಸ್ವತಂತ್ರವಾಗಿ ಬೆಳೆದಿರುವುದು, ಬೆಳೆಯುತ್ತಿರುವುದು ಕನ್ನಡ ಭಾಷೆಯ ಸಮೃದ್ಧಿಗೆ ಸಾಕ್ಷಿಯಾಗಿದೆ. ಅಂತೆಯೇ ಇಂದು ಕನ್ನಡ ವಾಙ್ಮಯ ಲೋಕದಲ್ಲಿ ಅನ್ಯ ಭಾಷೆಯ, ಭಿನ್ನ ಸಂಸ್ಕೃತಿಯ ಹಲವಾರು ವೈವಿಧ್ಯಮಯ ಕಾವ್ಯ ಪ್ರಕಾರಗಳು ಕನ್ನಡದವೇ ಎಂಬಂತೆ ಹಾಸು ಹೊಕ್ಕಾಗಿವೆ. ಕವಿಗೋಷ್ಠಿ, ಮುಶಾಯಿರಾಗಳು ಉರ್ದು ಮಾತನಾಡುವ ಜನರ ಸಂಸ್ಕೃತಿಯಲ್ಲಿಯೇ ಬೆರೆತು ಹೋಗಿದೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಅರೆಬಿಕ್ ಭಾಷೆಯ, ಫಾರಸಿ ಸಾಹಿತ್ಯದ ಕಾವ್ಯ ಪ್ರಕಾರ, ಉರ್ದು ಅದಬ್ ನಲ್ಲಿ ಪ್ರಸಿದ್ಧವಾದ ‘ರುಬಾಯಿ’. ಪರ್ಷಿಯನ್ ಕಾವ್ಯದಲ್ಲಿ ನಾವು ಪ್ರಮುಖವಾಗಿ ಎರಡು ಅರ್ಥಗಳನ್ನು, ಗುಣಗಳನ್ನು ನೋಡುತ್ತೇವೆ. ಒಂದು ಲೌಕಿಕವಾದರೆ ಮತ್ತೊಂದು ಅಲೌಕಿಕ. ಮೂಲಭೂತವಾಗಿ ಈ ಅಂಶವನ್ನು ರುಬಾಯಿಯೂ ಒಳಗೊಂಡಿದೆ. ಮೇಲೆ ಜೀವನದ ಆಸಕ್ತಿ, ಒಳಗೆ ಆಧ್ಯಾತ್ಮದ ತುಡಿತ ಇರುತ್ತದೆ. ರುಬಾಯಿಗಳು ಸುಖದ ಗೀತೆಗಳಲ್ಲ, ದುಃಖದ ಗೀತೆಗಳು ಎಂದು ಹೇಳುವವರೂ ಇದ್ದಾರೆ. ಆದರೆ ರುಬಾಯಿಗಳು ಬದುಕು ಮತ್ತು ಮಾನವ ಸ್ವಭಾವವನ್ನು ಕುರಿತ ಪರಿಭಾಷೆಗಳು ಎಂಬುದನ್ನು ಮರೆಯುವಂತಿಲ್ಲ.
ರುಬಾಯಿಯ ಅರ್ಥ:
ಶಬ್ಧ ಬಂಧುರ, ಅರ್ಥ ಬಂಧುರ ಸಾಲುಗಳಿಂದ ಕೂಡಿರುವ ಕಾವ್ಯ ಯಾವ ಭಾಷೆಯದಾದರೂ ಓದುಗರನ್ನು ಒಂದು ಕ್ಷಣ ತನ್ನೆಡೆಗೆ ಆಕರ್ಷಿಸುತ್ತದೆ. ಇದರಲ್ಲಿ “ರುಬಾಯಿ” ಸಾಹಿತ್ಯ ಪ್ರಕಾರವೂ ಒಂದು. ‘ರುಬಾಯಿ’ ಎಂಬ ಪದವು ಅರೇಬಿಕ್ ಪದ ‘ರುಬೆ’, ‘ರುಬಾ’, ‘ರುಅಬ್’, ‘ಅರಬಾ’, ದಿಂದ ಬಂದಿದೆ ಎಂದು ಹೇಳಲಾಗುತ್ತದೆ. ಇದರ ಅರ್ಥ “ನಾಲ್ಕು”. ರುಬಾಯಿ (ಏಕವಚನ ರೂಪ) ಒಂದು ಚತುರ್ಭುಜ ಅಥವಾ ಎರಡು ದ್ವಿಪದಿಗಳ ಒಂದು ಗುಂಪಾಗಿದೆ. ರುಬಾಯಿ ರೂಪವು ಸಾವಿರ ವರ್ಷಗಳಿಗಿಂತ ಹಳೆಯದು. ಇದು ಉರ್ದು ಮತ್ತು ಪರ್ಷಿಯಾದ ವಿಶೇಷ ಕಾವ್ಯ ಪ್ರಕಾರ. ‘ರುಬಾಯಿಯಾತ್’ ರುಬಾಯಿಯ ಬಹುವಚನವಾಗಿದೆ. ರುಬಾಯಿಗೆ ‘ದೋ-ಬೈತಿ’ ಎಂತಲೂ ಕರೆಯುತ್ತಾರೆ. ‘ಬೈತ್’ ಎಂದರೆ ಎರಡು ಮಿಸ್ರಾ, ಒಂದು ಷೇರ್ ಎಂದರ್ಥ.
ರುಬಾಯಿಯ ಇತಿಹಾಸ ಮತ್ತು ಪರಂಪರೆ:
ಕ್ರಿ.ಶ.251 ರಲ್ಲಿ ಅರೇಬಿಯಾದ ಒಂದು ಪ್ರದೇಶದಲ್ಲಿ ಸುಲ್ತಾನ್ ಯಾಕೂಬ್ ನ ಹುಡುಗ ಗೋಲಿಗಳ ಆಟವಾಡುತ್ತಿದ್ದ. ಗೋಲಿ ಉರುಳಿದಾಗ ಅವರ ಬಾಯಿಯಿಂದ ಕೆಲವು ಸಂತೋಷದ ಮಾತುಗಳು ಹೊರಹೊಮ್ಮಿದವು. ಆ ಪದಗಳಿಗೆ ವಿಶೇಷವಾದ ಲಯವಿತ್ತು. ಅಂದಿನ ಕವಿ ‘ಪರ್ಷಿಯನ್ ಕಾವ್ಯದ ಪಿತಾಮಹ’ ಎಂದು ಕರೆಯಲ್ಪಡುವ ಅಬ್ದುಲ್ ಹಸನ್ ರುಡಕಿ ಆ ಲಯಕ್ಕೆ ಮೂರು ಸಾಲುಗಳನ್ನು ಸೇರಿಸಿದರು. ಅದರಿಂದ ರುಬಾಯಿ ಮತ್ತು ಅದರ ಪದ್ಯ ಅಸ್ತಿತ್ವಕ್ಕೆ ಬಂದಿತು ಎಂದು ಹೇಳಲಾಗುತ್ತದೆ. ಈ ದಿಸೆಯಲ್ಲಿ ರುಬಾಯಿಯ ಮೂಲ ಮೌಖಿಕವಾಗಿದ್ದು, ಜಾನಪದ ರೂಪವಾಗಿತ್ತು ಎಂಬುದು ಮನದಟ್ಟಾಗುತ್ತದೆ. ಇದರೊಂದಿಗೆ ಈ ಛಂದವನ್ನು ಮೊಟ್ಟ ಮೊದಲು ಸೂಫಿ ಕವಿ ಶೇಖ್ ಸೈಯದ್ ಬಿನ್ ಅಬುಲ್ ಖೈರ್ ಪ್ರಯೋಗ ಮಾಡಿದ್ದಾರೆ ಎಂದೂ ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ರುಬಾಯಿ ಖಂಡಿತವಾಗಿಯೂ ಅರೇಬಿಯಾದ ಕೊಡುಗೆಯಾಗಿದೆ. ಆದರೆ ಈ ವಿಧಾನವು ಇರಾನ್‍ನಲ್ಲಿ ಖ್ಯಾತಿಯನ್ನು ಪಡೆಯಿತು. ರಾಬಿಯಾ ಬಲ್ಕಿ, ಜೈನಾಬ್ ಹೊತಕಿ, ಮಿರಮನ್ ಹಾಲಿಮ್, ಮಸಹತಿ ಅವರಂತಹ ಶಾಯರ್ ಕೂಡ ಆಗಿ ಹೋಗಿದ್ದಾರೆ. ಇಲ್ಲಿ ರಾಬಿಯಾ ಬಲ್ಕಿಯವರ ಒಂದು ರುಬಾಯಿಯನ್ನು ಗಮನಿಸಿ ಮುಂದೆ ಸಾಗೋಣ.
“The love of you is reason that now I’m in prison:
I tried to keep it secret, but who can one rely on?
Love is a sea with shore that’s always further on:
One wise in such a sea won’t swim, or will drown”
ಇವರೊಂದಿಗೆ ಜಲಾಲುದ್ದೀನ್ ರೂಮಿ, ಸೌದಿ ಸಿರಾಜ್, ಹಾಫಿಜ್, ಫಿರ್‍ದೌಸಿ, ಅಹ್ಮದ್ ಗಜಲಿ, ಮೆಹ್ಸೆತಿ ಗಂಜಾವಿ, ಖೇರಾನ್-ಖಾನುಮ್, ಜಹಿರಿದ್ದೀನ್ ಬಾಬರ್, ಅಮ್ಜದ್ ಹೈದರಾಬಾದಿ…. ಮುಂತಾದವರಿಂದ ರುಬಾಯಿ ಜನಮಾನಸದಲ್ಲಿ ಬೆರೆತು ಹೋಗಿದೆ. ಇರಾನ್‍ನಲ್ಲಿ 12 ನೇ ಶತಮಾನವು ಉಮರ್ ಖಯ್ಯಾಮ್‍ನ ರುಬಾಯತ್ ಗೆ ಪ್ರಸಿದ್ಧವಾಗಿದೆ. ಉಮರ್ ಖಯ್ಯಾಮ್ (1048-1133) ಶ್ರೇಷ್ಠ ಪರ್ಷಿಯನ್ ಕವಿ, ಖಗೋಳಶಾಸ್ತ್ರಜ್ಞ, ತತ್ವಜ್ಞಾನಿ ಮತ್ತು ಗಣಿತಜ್ಞ. ಖಯ್ಯಾಮ್ ತಮ್ಮ ಪ್ರಿಯತಮೆಯನ್ನು ತುಂಬಾ ಪ್ರೀತಿಸುತಿದ್ದರು, ಜೊತೆಗೆ ದ್ರಾಕ್ಷಾರಸದ ಭಕ್ತರೂ ಆಗಿದ್ದರು. ತಮ್ಮ ಪ್ರಿಯತಮೆಯ ನೆನಪುಗಳ ಮೊಳಕೆಯೊಡೆದ ಪ್ರೇರಣೆಯಿಂದ ಪ್ರೇಮ, ನೋವು, ತತ್ವಶಾಸ್ತ್ರ ಮತ್ತು ದ್ರಾಕ್ಷಾರಸಗಳಿಂದ ತುಂಬಿದ ಸುಂದರ ರುಬಾಯಿಯಾತ್ ರಚಿಸಿದರು. ಈ ರಚನೆ ಸೂಕ್ಷ್ಮ ರೀತಿಯ ಭಾವಾಭಿವ್ಯಕ್ತತೆಗೆ ಸರಿ ಎಂದು ತಿಳಿದ ಉಮರ್ ಅದನ್ನೇ ತಮ್ಮ ಕಾವ್ಯದ ಮಾಧ್ಯಮವನ್ನಾಗಿ ಬಳಸಿಕೊಂಡರು. ಅಂತರಂಗವನ್ನು ಕಲಕುವ, ಭಾವಶಕ್ತಿ ತಂತ್ರ ಉಮರ್ ಅವರದು ಆಗಿದ್ದುದರಿಂದ ಪ್ರಸಿದ್ಧಿ ಪಡೆದರು. ಅವರ ರುಬಾಯಿಯಾತ್ ಅನ್ನು ಇಂಗ್ಲೀಷ್ ಸೇರಿದಂತೆ ಪ್ರಪಂಚದ ಹಲವಾರು ಭಾಷೆಗಳಿಗೆ ಅನುವಾದಿಸಲಾಗಿದೆ. ಆಂಗ್ಲ ಭಾಷೆಯ ಕವಿ ಎಡ್ವರ್ಡ್ ಫಿಟ್ಜ್ ಜೆರಾಲ್ಡ್ (1809-1883) ರವರು ಉಮರ್ ಖಯ್ಯಾಮ್ ನ ರುಬಾಯಿಯ ಖ್ಯಾತಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಜೆರಾಲ್ಡ್ ಸ್ವತಃ ಉತ್ತಮ ಕವಿಯಾಗಿದ್ದರೂ ಕಾವ್ಯದ ಓದುಗರಲ್ಲಿ, ಅವರು ತಮ್ಮ ಕವಿತೆಗಳಿಗಿಂತ ಖಯ್ಯಾಮ್‍ನ ರುಬಾಯಿಯ ಅನುವಾದಕರಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಜೀವನದ ಅರ್ಥಹೀನತೆಯಲ್ಲಿ ವೈಯಕ್ತಿಕ ಅರ್ಥದ ಹುಡುಕಾಟವು ಖಯ್ಯಾಮ್ ಅವರ ‘ರುಬಾಯಿಯಾತ್’ನ ಕೇಂದ್ರ ವಿಷಯವಾಗಿದೆ. ಅವುಗಳು ಬದುಕು ಮತ್ತು ಮಾನವನ ಸ್ವಭಾವಕ್ಕೆ ತುಂಬಾ ಹತ್ತಿರವಾಗಿವೆ. ಅವರ ರುಬಾಯಿಯಾತ್ ಶಾಯರ್ ತನಗೆ ತಾನೇ ಹೇಳಿಕೊಂಡ ಸ್ವಗತಗಳಂತಿವೆ. ಈ ನೆಲೆಯಲ್ಲಿ ಆಂಗ್ಲ ಬರಹಗಾರ ಚೆಸ್ಟರಟನ್ ಅವರ ಈ ಮಾತು ಇಲ್ಲಿ ಉಲ್ಲೇಖನೀಯ. “Omer’s Philosophy is not the philosophy of happy people but of unhappy people” ಅಂದರೆ ರುಬಾಯಿಗಳು ಸುಖದ ಗೀತೆಗಳಲ್ಲ, ದುಃಖದ ಗೀತೆಗಳು. ಉಮರ್ ಖಯ್ಯಾಮ್ ಪ್ರಥಮ ಪ್ರಸಿದ್ಧ ಸೂಫಿ ಬರಹಗಾರ. ಸೂಫಿ ಪಂಥದ ಪ್ರಚಾರಕ್ಕೆ ಥಟ್ಟನೆ ಮನಸ್ಸಿಗೆ ನಾಟಿ, ನೆನಪಿನಲ್ಲಿ ಉಳಿಯುವ ಸಾಧನವಾಗಿ ರುಬಾಯಿಯು ಬಳಕೆಯಾಯಿತು.
ಎಲ್ಲವನ್ನೂ ರುಬಾಯಿಯಲ್ಲಿ ಹೇಳಬಹುದಾದರೂ ಉರ್ದು ಕವಿಗಳು ಅದರಲ್ಲಿ ನೈತಿಕ ವಿಷಯಗಳನ್ನು ಹೆಚ್ಚಾಗಿ ಬರೆದಿದ್ದಾರೆ. ಉರ್ದು ಶಾಯರ್ ಗಳು ರುಬಾಯಿ ಹೇಳದಿದ್ದರೆ, ತಮ್ಮ ಕಾವ್ಯ ಕಲೆ ಅಪೂರ್ಣ ಎಂದು ತಿಳಿಯುತ್ತಿದ್ದರಂತೆ. ರುಬಾಯಿ ಎನ್ನುವುದು ತುಂಬಾ ಕೋಮಲ, ಸೂಕ್ಷ್ಮ ಹಾಗೂ ಜಟಿಲ. ಇದಕ್ಕಾಗಿ ಪ್ರತಿಭೆ, ಬದ್ಧತೆಯ ಅವಶ್ಯಕತೆ ಇದೆ. ರುಬಾಯಿಯಾತ್ ಬಹುತೇಕ ಎಲ್ಲಾ ಉರ್ದು ಕವಿಗಳು ಬರೆದಿದ್ದಾರೆ. ಉತ್ತಮ ಬೆಳೆಯನ್ನು ಬೆಳೆದಿದ್ದಾರೆ. ಅವರುಗಳಲ್ಲಿ ಅಕ್ತರ್ ಅನ್ಸಾರಿ, ಮೀರ್ ಅನೀಸ್, ದಬೀರ್, ಸಾಧಿಕೈನ್, ನಾವಕ ಹಮಜಾಪುರಿ, ಅಕ್ಬರ್ ಹೈದರಾಬಾದೀ, ಸೌದ್, ದಾಗ್, ಮೀರ್ ತಕೀ ಮೀರ್, ಮಿರ್ಜಾ ಗಾಲಿಬ್, ಅಲ್ಲಮಾ ಇಕ್ಬಾಲ್, ಫಿರಾಕ್ ಗೋರಕಪುರಿ, ಜಗತ್ಮೋಹನ್ ‘ಖಾನ್’, ಜೋಶ್,… ಮುಂತಾದ ಮಹನೀಯರು ರುಬಾಯತ್ ಆಗಸದಲ್ಲಿ ತಾರೆಗಳಂತೆ ಮಿನುಗಿದ್ದಾರೆ, ಮಿನುಗುತಿದ್ದಾರೆ.
ಇಂಗ್ಲೀಷಿನಲ್ಲಿ ರುಬಾಯತ್ ಮೂಡಿ ಬಂದಂತೆ ಹಿಂದಿಯಲ್ಲೂ ಅನುವಾದ ಹಾಗೂ ಸ್ವತಂತ್ರವಾಗಿ ರಚನೆ ಮಾಡಿದ್ದಾರೆ. ಅವರಲ್ಲಿ ಡಾ.ಹರಿವಂಶರಾಯ್ ಬಚ್ಚನ್ ಅವರು ಅಗ್ರಗಣ್ಯರು. ಇರಾನ್‍ನ ಉಮರ್ ಖಯ್ಯಾಮ್ ನ ಮಾಯೆಯಿಂದ ತಪ್ಪಿಸಿಕೊಳ್ಳಲು ಅವರಿಗೂ ಸಾಧ್ಯವಾಗಲಿಲ್ಲ. ಬಚ್ಚನ್ ಜೀ ಇಂಗ್ಲೀಷ್ ಶಿಕ್ಷಕರಾಗಿದ್ದರು. ಸಹಜವಾಗಿಯೇ ಫಿಟ್ಜ್ ಜೆರಾಲ್ಡ್‍ನ ಅವರ ಅನುವಾದಿತ ಇಂಗ್ಲೀಷ್ ಆವೃತ್ತಿಯ ಮೂಲಕ ಉಮರ್ ಖಯ್ಯಾಮ್ ಅವರ ರುಬಾಯತ್ ಓದಿ ಪ್ರಭಾವಕ್ಕೆ ಒಳಗಾದರು. ಮುಶಾಯಿರಾಗಳಲ್ಲಿ ವೈಚಾರಿಕತೆಗಿಂತಲೂ ರಸಿಕತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇಂಥ ರಸಿಕತೆಗೆ ವೈಚಾರಿಕತೆಯನ್ನು ಮೇಳೈಸಿ ಮುಂದೆ ತಮ್ಮ ಸ್ವಂತ ಮೀಟರ್ ನಲ್ಲಿ ರುಬಾಯಿ ರಚಿಸಿ ಹಲವು ಸಂಕಲನಗಳನ್ನು ಪ್ರಕಟಿಸಿದರು. ಮಧುಬಾಲಾ, ಮಧುಶಾಲಾ, ನಿಶಾನಿಮಂತ್ರಣ, ಉಮರ ಖಯ್ಯಾಮನ ರುಬಾಯಿಗಳ ಹಿಂದಿ ಭಾವಾನುವಾದ ಈ ಎಲ್ಲ ಕೃತಿಗಳು ಹಿಂದಿ ಸಾಂಸ್ಕೃತಿಕ ಲೋಕದಲ್ಲಿ ಕ್ರಾಂತಿಯನ್ನೇ ಮಾಡಿವೆ. ಇವುಗಳಲ್ಲಿ ‘ಮಧುಶಾಲಾ’ (1934) ಹಿಂದಿ ಕಾವ್ಯ ಪ್ರಪಂಚದಲ್ಲಿ ನಿತ್ಯ ಆರಾಧನೆಗೆ ಒಳಗಾಗುತ್ತಿರುವ ಅನುಪಮ ಕಲಾಕೃತಿ. ಇದು ಇಂದಿಗೂ ಓದುಗರೊಂದಿಗೆ ಅವರ ಜೀವನಾಡಿಯಾಗಿ ಚಲಿಸುತ್ತಿದೆ ಮತ್ತು ಸಂಭಾಷಣೆಯಲ್ಲಿ ಭಾಷೆ ವೈಶಿಷ್ಟ್ಯವಾಗಿ ಬಳಸಲ್ಪಡುತ್ತಿದೆ.
ಈ ಪುಸ್ತಕದ ಜನಪ್ರಿಯತೆಗೆ ಪ್ರಮುಖ ಕಾರಣವೆಂದರೆ ಅದರಲ್ಲಿ ಬಳಕೆಯಾದ ಹಾಲ, ಪ್ಯಾಲಾ, ಸಾಕಿ ಬಾಲ…. ಇತ್ಯಾದಿ ಪದಗಳ ವಿಶಿಷ್ಟ ಸಂಕೇತಗಳು. ಇದರೊಂದಿಗೆ ಇನ್ನೂ ಒಂದು ಆಕರ್ಷಣೆಯಿದೆ. ಅದೆಂದರೆ ಅಲ್ಲಿಯ ರುಬಾಯಾತ್ ನಲ್ಲಿ ಸಾಮಾನ್ಯ ಮನುಷ್ಯನೂ ಸಹ ತನ್ನ ದುಃಖ ಮತ್ತು ಸಂತೋಷವನ್ನು ಕಂಡುಕೊಳ್ಳುತ್ತಾನೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ…
“ಕೈಯೊಳಗೆ ಬರುವ ಮೊದಲು ಮಧುಪಾತ್ರೆ ಬಿಂಕ ತೋರುವುದು
ತುಟಿಯ ಬಳಿ ಬರುವ ಮೊದಲು ಮಧು ಬಿನ್ನಾಣ ತೋರಿಯಾಳು
ಬಹು ವಿಧವಾಗಿ ತಿರಸ್ಕಾರ ಮಾಡಬಹುದು, ಸಾಕಿ ಬರುವ ಮೊದಲೇ
ಗಾಬರಿಯಾಗದಿರು ಪಥಿಕ, ಮೊದಲು ಗೌರವಿಸುವಳು ಮಧುಶಾಲೆ”
ಇನ್ನೂ ಫಿರಾಕ್ ಗೋರಖಪುರಿಯವರ ಹೆಸರು ‘ರುಬಾಯಿ’ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಇವರು ಅಸಂಖ್ಯಾತ ರುಬಾಯಿಯಾತ್ ಬರೆದಿದ್ದಾರೆ. ‘ರೂಪ್’ ಇದೊಂದು ಇವರ ಪ್ರಸಿದ್ಧ ರುಬಾಯಿ ಸಂಕಲನವಾಗಿದೆ. ಇವರೊಂದಿಗೆ ಸುಮಿತ್ರಾನಂದನ ಪಂತರನ್ನೂ ಹಾಗೂ 1955 ರಲ್ಲಿ ಮೈಥಿಲಿ ಶರಣಗುಪ್ತ ರವರು “ರುಬಾಯಿಯಾತ್ ಉಮರ್ ಖಯ್ಯಾಮ್” ಕೃತಿಯನ್ನು ಬರೆದಿರುವುದನ್ನು ಸ್ಮರಿಸಲೇಬೇಕು. ಈ ಹಿನ್ನೆಲೆಯಲ್ಲಿ ಡಾ.ಇಕ್ಬಾಲ್ ರವರ ಒಂದು ರುಬಾಯಿಯನ್ನು ಗಮನಿಸೋಣ.
“ಕಣ ಕಣಗಳಲ್ಲಿ ಆ ರಕ್ತವು ಉಳಿದಿಲ್ಲ
ಆ ಹೃದಯದಲ್ಲಿ ಬಯಕೆಯು ಉಳಿದಿಲ್ಲ
ಪ್ರಾರ್ಥನೆ-ಉಪವಾಸ-ಬಲಿದಾನ-ಯಾತ್ರೆ
ಇದೆಲ್ಲವೂ ಉಳಿದಿವೆ ನೀನು ಉಳಿದಿಲ್ಲ”
ಒಂದು ಭಾಷೆ ಮತ್ತು ಸಾಹಿತ್ಯ ಸಮೃದ್ಧವಾಗಿ ಬೆಳೆಯಬೇಕಾದರೆ ಅದರ ವ್ಯಾಪ್ತಿ ವಿಸ್ತೃತವಾಗುತ್ತ ಹೋಗುತ್ತದೆ, ಹೋಗಬೇಕು. ಅದರ ಕಂಪು ಎಲ್ಲೆಡೆ ಪಸರಿಸಬೇಕಾದರೆ ನಮ್ಮ ಸಾಹಿತ್ಯವು ಮತ್ತೊಂದು ಭಾμÉಗೆ ಅನುವಾದವಾಗುವುದು ತುಂಬಾ ಮುಖ್ಯ. ಇದರೊಂದಿಗೆ ಅನ್ಯ ಭಾಷೆಯ ಸಾಹಿತ್ಯ ಕೂಡ ನಮ್ಮ ಭಾಷೆಗೆ ಅನುವಾದದ ಮುಖಾಂತರ, ನಂತರ ಸ್ವತಂತ್ರ ರಚನೆಯ ರೂಪದಲ್ಲಿ ಬರಬೇಕು. ಕಾವ್ಯಕ್ಕೆ ಯಾವ ಭಾಷೆಯ ಹಂಗಿಲ್ಲ. ಅದನ್ನು ಎಲ್ಲರಿಗೂ ಅವರವರ ಭಾವಕ್ಕೆ ತಕ್ಕುದಾಗಿ ತಲುಪಿಸುವುದು ಮುಖ್ಯವಾಗುತ್ತದೆ. ಅನುವಾದದ ಮೂಲಕ (ಕನ್ನಡದಿಂದ ಬೇರೆ ಭಾಷೆಗೆ, ಬೇರೆ ಭಾಷೆಗಳಿಂದ ನಮ್ಮ ಭಾಷೆಗೆ) ನಮ್ಮ ಭಾಷೆ ಇನ್ನೊಂದು ಭಾಷೆಯ ಜನರಿಗೆ ತಲುಪುವ ಮೂಲಕ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗುತ್ತದೆ. ಈ ನೆಲೆಯಲ್ಲಿ ಕನ್ನಡ ಸಾಹಿತ್ಯವು ಸಶಕ್ತವಾಗಿ ಹೆಜ್ಜೆ ಹಾಕುತಿದೆ. ಇದರ ಪ್ರತಿಫಲದ ರೂಪದಲ್ಲಿ ‘ರುಬಾಯಿ’ ಕೂಡ ಒಂದು. ಡಾ.ಎಸ್.ವಿದ್ಯಾಶಂಕರ ರವರು ಹಿಂದಿಯ ಪ್ರಸಿದ್ಧ ರುಬಾಯಿಯಾತ್ ಅನ್ನು ಮೊದಲಿಗೆ ಕನ್ನಡಕ್ಕೆ ಅನುವಾದದ ಮೂಲಕ ಪರಿಚಯಿಸಿದರು ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಡಿ.ವಿ.ಜಿ, ಅ.ನ.ಕೃ, ಗೋವಿಂದ ಪೈ (ಅವರ ‘ಗಿಳಿವಿಂಡು’ ಕವನ ಸಂಕಲನದಲ್ಲಿ ಅವರಿಂದ ಅನುವಾದಿತ 50 ರುಬಾಯತ್ ಇವೆ), ಎಂ.ವಿ.ಚಿತ್ರಲಿಂಗಯ್ಯ, ಶಾಂತರಸ, ಶಾ.ಬಾಲುರಾವ್, ಚಂದ್ರಕಾಂತ ಕುಸನೂರ, ಶರಣಪ್ಪ, ಗುಣಕಿಮಠ, ಜಗದೀಶ್, ಅಮರಚಿಂತ, ಡಾ.ಕೆ.ಬಿ.ಬ್ಯಾಳಿ, ಡಾ.ಪಂಚಾಕ್ಷರಿ ಹಿರೇಮಠ, ಲಕ್ಕೂರು ಆನಂದ,.. ಮುಂತಾದವರು ರುಬಾಯಿಯಾತ್ ಅನ್ನು ಕನ್ನಡಕ್ಕೆ ತಂದಿದ್ದಾರೆ, ಅಂದರೆ ಉರ್ದು, ಹಿಂದಿ, ಇಂಗ್ಲೀಷ್ ಹಾಗೂ ಫಾರಸಿಯಿಂದ. ಅವುಗಳಲ್ಲಿ ‘ಉಮರನ ಒಸಗೆ’ ಎಂಬ ಹೆಸರಿನಲ್ಲಿ ಡಿ.ವಿ.ಜಿ ಯವರು ಅನುವಾದಿಸಿರುವುದು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಖಯ್ಯಾಮನ ಕಾವ್ಯದ ಅನುವಾದ-ಅಧ್ಯಯನಗಳ ಕ್ಷೇತ್ರದಲ್ಲಿ ಡಿ.ವಿ.ಜಿ. ಅವರ ‘ಉಮರನ ಒಸಗೆ’ ಕನ್ನಡ ಇಟ್ಟ ಮೊದಲ ದೊಡ್ಡ ಹೆಜ್ಜೆಯಾಗಿದೆ.
“ನಾವು ಒಲಿದವರಲ್ಲಿ ಕೆಲವರಿದ್ದರು, ಐನಾತಿ ಕುಲವದವರು,
ಕಾಲ, ವಿಧಿ-ಎರಡೂ ತಂತಮ್ಮ ಸುಗ್ಗಿಫಲ ಹಿಂಡಿ ಮಾಡಿದಂಥವರು.
ನಮಗೆ ಮೊದಲೇ ಒಂದೆರಡು ಸುತ್ತು ತಮ್ಮ ಬಟ್ಟಲ ಹೀರಿ
ಮೌನದಲ್ಲೊಬ್ಬಬ್ಬರಾಗಿ ಚಿರಶಾಂತಿಗೈದಿದರು”.
ಕನ್ನಡದಲ್ಲಿ ಗಜಲ್ ಕೃಷಿಗೆ ಮುನ್ನುಡಿ ಬರೆದ ಶಾಂತರಸ ಅವರು ಹನ್ನೊಂದು ರುಬಾಯಿಯಾತ್ ರಚಿಸಿರುವುದನ್ನು ಡಾ.ಪ್ರಭು ಖಾನಾಪುರೆಯವರು ತಮ್ಮ ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. ಅವರ ಒಂದು ರುಬಾಯಿಯನ್ನು ಇಲ್ಲಿ ಗಮನಿಸಬಹುದು.
“ಸಂಶಯಕ್ಕೊಳಗಾದ ಸಾಚಾ ಹೆಣ್ಣೊಂದು
ಹಚ್ಚಿಕೊಂಡಳು ಬೆಂಕಿ, ಆರಿಸಿದ ಗಂಡ ಬಂದು
ಅಳುತ ನುಡಿದಳು; ಸುಳ್ಳು ಬರದಾರ ಅಯ್ಯಯ್ಯೋ
ರಾಮಾಯಣದಾಗ ಸೀತೆ ಸುಡಲಿಲ್ಲವೆಂದು”
ಡಾ.ಕೆ.ಬಿ.ಬ್ಯಾಳಿಯವರದು ಕನ್ನಡ ರುಬಾಯಿ ಅಂಗಳದಲ್ಲಿ ಬಹು ದೊಡ್ಡ ಹೆಸರು. ಇವರ “ಕನ್ನಡಕ್ಕೆ ರುಬಾಯಿಗಳು” ಎಂಬ ಹೊತ್ತಿಗೆಯು ಕನ್ನಡದಲ್ಲಿ ಪ್ರಕಟಗೊಂಡ ಮೊದಲ ಸಂಕಲನವೆಂದು ಜಂಬಣ್ಣ ಅಮರಚಿಂತ ಅವರು ಹೆಮ್ಮೆಯಿಂದ ಹೇಳಿದ್ದಾರೆ. ಈ ಪುಸ್ತಕದಲ್ಲಿ ಹಿಂದಿ ಕವಿ ನೀರಜ್ ರವರ 85 ಹಿಂದಿ ರುಬಾಯಿಯಾತ್ ಅನ್ನು ಅನುವಾದಿಸಿದ್ದಾರೆ. ಜೊತೆಗೆ ಅವರೇ ಸ್ವತಂತ್ರವಾಗಿ ಬರೆದ 25 ರುಬಾಯಿಯಾತ್ ಕೂಡ ಇದರಲ್ಲಿವೆ. ಹಿಂದಿ ಕವಿ, ಗೀತಕಾರ ನೀರಜ್ ಅವರ ಅನುಭವದಂತೆ “ರುಬಾಯಿ ರಚನೆಯಲ್ಲಿ ಅದರ ನಾಲ್ಕನೇ ಮಿಸ್ರಾ ಮೊದಲು ಬರೆಯಲ್ಪಡುತ್ತದೆ. ಅಂದರೆ ನಂತರ ಮೂರನೇ ಮಿಸ್ರಾ, ಎರಡನೇ ಮಿಸ್ರಾ ಹಾಗೂ ಒಂದನೇ ಮಿಸ್ರಾ, ಈ ರೀತಿ ಬರೆಯಲ್ಪಡುತ್ತದೆ” ಎನ್ನುತ್ತಾರೆ. ಇನ್ನೂ ಮುಂದುವರೆದು ಇದಕ್ಕೆ ‘ಉಲ್ಟಿಗಂಗಾ’ ಎಂದೂ ಕರೆಯುತ್ತಾರೆ ಎಂದಿದ್ದಾರೆ.
ಡಾ.ಎಸ್.ವಿದ್ಯಾಶಂಕರ ಅವರು “ಕನ್ನಡದಲ್ಲಿ 25 ರುಬಾಯಿಗಳನ್ನು ಮೊದಲಿಗೆ ರಚಿಸಿದವರು ಕೆ.ಬಿ.ಬ್ಯಾಳಿ ಅವರು” ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಕೆ.ಬಿ.ಬ್ಯಾಳಿಯವರು ಕನ್ನಡ ರುಬಾಯಿ ಕಾವ್ಯ ಪ್ರಕಾರಕ್ಕೆ ಆಚಾರ್ಯಪುರುಷರು ಎನ್ನಬಹುದು. ಬ್ಯಾಳಿಯವರ ಒಂದು ರುಬಾಯಿಯನ್ನು ಇಲ್ಲಿ ಗಮನಿಸಬಹುದು.
“ಬೆಳೆ ನಾಶವಾಗುವಷ್ಟು ಮಳೆಯಾಗಬಾರದು
ದೇಶ ನಾಶವಾಗುವಷ್ಟು ದ್ವೇಷ ಬೆಳೆಯಬಾರದು
ಮಳೆಯಾಗಿ ಬೆಳೆ ಬರಲಿ, ಬೆಳೆ ಬಂದು ದೇಶ ಸಮೃದ್ಧವಾಗಲಿ
ನಾನಿದ್ದರೆ, ದ್ವೇಷವೆನ್ನುವ ಭಾವ ಬೆಳೆಯಬಾರದು”
ನಾವೆಲ್ಲರೂ ಇಂದು ಸಮಯದ ಅಭಾವ ಎಂಬ ಕೆಸರಿನ ಮಡುವಿನಲ್ಲಿ ಸಿಲುಕಿಕೊಂಡಿದ್ದೇವೆ. ನಮ್ಮ ನಂಬಿಕೆಗಳು ಬದಲಾಗಿವೆ, ಜೀವನಕ್ರಮ ಬದಲಾಗಿದೆ; ಸಂವೇದನೆಗಳು ಬದಲಾಗಿವೆ. ಇಂದಿನ ಸಮಾಜ ಅತಂತ್ರ ಮತ್ತು ಅನಿಶ್ಚಿತ ಸ್ಥಿತಿಯಲ್ಲಿ ಉಸಿರಾಡುತ್ತಿದೆ. ಇದರೊಂದಿಗೆ ಕಾವ್ಯದ ಸ್ವರೂಪವೂ ಬದಲಾಗಿದೆ, ಜೊತೆಗೆ ಅಭಿವ್ಯಕ್ತಿಯ ರೂಪವೂ ಬದಲಾಗಿದೆ. ಇದರ ಫಲವೋ ಏನೋ ಇಂದಿನ ಜನರಿಗೆ ಮಹಾಕಾವ್ಯ, ದೀರ್ಘ ಕಾವ್ಯಗಳನ್ನು ಓದಲು ಆಗುತ್ತಲೇ ಇಲ್ಲ. (ಪುರುಸೊತ್ತಿಲ್ಲ ಎನ್ನುವ ಸಬೂಬು ಬೇರೆ) ಇದರಿಂದಾಗಿಯೇ ಕಿರು ಕಾವ್ಯ ರೂಪಗಳು ಉದಯಿಸಿವೆ ಎಂದರೆ ಅತಿಶಯೋಕ್ತಿಯಾಗದು. ವಿಸ್ಮಯವೆಂದರೆ ಕಿರು ಕಾವ್ಯಗಳಿಗೆ ಒಂದು ಮುಕ್ತ ವೇದಿಕೆ ಒದಗಿಸಿ ಕೊಟ್ಟಿರುವುದು ಸಾಮಾಜಿಕ ಅಂತರ್ಜಾಲದ ತಾಣಗಳು. ಫೇಸ್ ಬುಕ್, ವ್ಯಾಟ್ಸಫ್, ಪ್ರತಿಲಿಪಿ, ಯೂವರ್ ಕೋಟ್, ಅಂತರ್ಜಾಲ ಪತ್ರಿಕೆ,…. ಮುಂತಾದ ತಾಣಗಳಲ್ಲಿ ಬರೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೂ ಸೋಜಿಗವೆಂದರೆ ಯಾವ ಕಾವ್ಯ ರೂಪಗಳು ಇದರಿಂದ ದೂರವುಳಿದಿಲ್ಲ. ಭಾಷೆಯ ಹಿನ್ನೆಲೆಯಲ್ಲಿ ಸ್ತ್ರೀ ಲಿಂಗ ರೂಪದಲ್ಲಿ ಇರುವ ‘ರುಬಾಯಿ’ ಸುಕೋಮಲ ಮನಸ್ಸುಗಳ ಅಯಸ್ಕಾಂತ. ತಮ್ಮ ಪ್ರೀತಿ, ಪ್ರೇಮ, ಪ್ರಣಯ, ವಿರಹ, ದುಃಖ, ದುಮ್ಮಾನ, ವಿಡಂಬನೆ, ಹಾಸ್ಯ, ನೀತಿ…. ಎಲ್ಲವುಗಳನ್ನು ಅಭಿವ್ಯಕ್ತಿಸಲು ರುಬಾಯಿಗೆ ಮಾರೂ ಹೋಗಿರುವುದು ಕಂಡು ಬರುತ್ತದೆ. ಆದರೆ… ಆದರೆ ಆಧುನಿಕತೆಯ ಭರಾಟೆಯಲ್ಲಿ ಮೂಲ ಬೆಹರ್ ಮರೆಯಾಗಿದೆ. ಬರಹಗಾರರಲ್ಲಿ ಲಿಂಗ, ಜಾತಿ, ವಿದ್ಯೆ, ವಯಸ್ಸಿನ ತಾರತಮ್ಯ ಇಲ್ಲ. ಅಸಂಖ್ಯಾತ ಜನರಲ್ಲಿ ಕೆಲವೇ ಕೆಲವು ಜನರನ್ನು ಇಲ್ಲಿ ದಾಖಲಿಸಲು ಸಾಧ್ಯ ಎಂಬ ಮಿತಿಯ ಹಿನ್ನೆಲೆಯಲ್ಲಿ ಮುಂದುವರೆಯುತ್ತಿರುವೆ… ವೈ.ಬಿ.ಹಾಲಬಾವಿ, ಶಾಲಿನಿ ಆರ್, ಮೆಹಬೂಬ್ಬಿ ಶೇಕ್, ಶಬ್ಬಿರ್ ಹುಳಿಯಾರ್, ತೇಜಾವತಿ ಎಚ್.ಡಿ, ಶಶಿಕಾಂತ ದೇಸಾಯಿ, ಮನೋಜ್ ಮಕರಂದ, ಡಾ. ಮಲ್ಲಿನಾಥ ಎಸ್.ತಳವಾರ, ವಿಜಯಕುಮಾರ ಪರುತೆ, ಡಾ. ಜಯದೇವಿ ಗಾಯಕವಾಡ,….. ಉದಾಹರಣೆಗಾಗಿ ಕೆಲವೊಂದು ರುಬಾಯತ್ ಇಲ್ಲಿ ಗಮನಿಸಬಹುದು.
“ಅದೆಷ್ಟು ಕೌತುಕಗಳು ಹುದುಗಿವೆಯೋ ಈ ಸೃಷ್ಟಿಯಲ್ಲಿ
ಬಿಟ್ಟುಕೊಡದ ಗುಟ್ಟುಗಳೆಷ್ಟಿವೆಯೋ ಈ ಜಗದ ದೃಷ್ಟಿಯಲ್ಲಿ
ಜೀವ, ಜೀವಗಳ ಜಾಲ ರಹಸ್ಯವೀ ಗೋಳ ಓ ‘ಹಾಲ’
ವಿಧ, ವಿಧ ರೂಪ ರೂಪಾಂತರ ಬೆಸೆದಿದೆ ಈ ಸಮಷ್ಟಿಯಲ್ಲಿ” -ವೈ.ಬಿ. ಹಾಲಬಾವಿ
“ನಾನು ಕಕ್ಷಿದಾರ ನನಗೆ ವಕೀಲ ನೀನೇ..
ವಿಚಾರಣೆಗೆ ಮುಷ್ಕರ ಹೂಡುವವನು ನೀನೇ..
ವಕೀಲನ ಮುಷ್ಕರದ ಹೊಣೆಗಾರಿಕೆ ಮರದ್ದು ಪ್ರಿಯಾ..
ಹಾಗಿದ್ದೂ ಈ ಮನದ ಕಾಳಜಿ ನೀನೇ..”
-ಮೆಹಬೂಬ್ಬಿ. ಶೇಕ್
“ಮುಂಗಾರಿನ ಕರಿಮುಗಿಲ ಕಾನನ
ಸುರಿಯುತಿದೆ ಜೀವಹನಿ ತಾನನ
ಚೆಂದದೊಡಲ ಇಳೆಗದು ಸಂಭ್ರಮ
ಬಾಳಿನಂದದಲಿ ಉಸಿರ ನರ್ತನ…” -ಶಾಲಿನಿ.ಆರ್
“ಮುನಿಸಿಕೊಳ್ಳದಿರು ಗೆಳತಿ
ನೀನೆ ನನ್ನ ಬಾಳಿಗೆ ಆರತಿ
ನೀನಿಲ್ಲದ ಬಾಳು ಒಂದು ಗೋಳು
ನೀನೆನ್ನ ಮನ ಬೆಳಗೊ ಜ್ಯೋತಿ”
-ರತ್ನರಾಯಮಲ್ಲ
(-ಮುಂದುವರೆಯುವುದು. ಮುಂದಿನ ಭಾಗದಲ್ಲಿ ರುಬಾಯಿಯ ವ್ಯಾಖ್ಯಾನ, ಸ್ವರೂಪ ಮತ್ತು ಲಕ್ಷಣಗಳು)