ಗಜಲ್..
ಹೃದಯ ಬಾಗಿಲು ತೆರೆದು ಶಬರಿಯಂತೆ ಕಾಯುವಳು ನನಗಾಗಿ
ನಿದಿರೆ ಇರದ ಇರುಳಲಿ ಕನಸುಗಳನು ಹೆಣೆಯುವಳು ನನಗಾಗಿ
ಬರುವ ಕಾದು ದಣಿದ ಹೊಳೆವ ಕಣ್ಣ ಕಾಂತಿಯು ಮಂಕಾಯಿತು
ಒಂಟಿಯಾಗಿ ವಿರಹದ ಕುಲುಮೆಯಲಿ ಬೇಯುವಳು ನನಗಾಗಿ
ಕಿಟಕಿಯಲಿ ಬಂದ ಚಂದಿರಾ ಕಚಗುಳಿ ಇಡುತಾ ಕಾಡುವನು
ಬೆಳದಿಂಗಳ ನಿಶೆ ಅಪ್ಪುಗೆಯಲಿ ಕನವರಿಸುವಳು ನನಗಾಗಿ
ಮಲ್ಲಿಗೆ ಮುಡಿದು ಬಳಕುತ ಮೆಲ್ಲಗೆ ಹೆಜ್ಜೆ ಇಡುತಾ ಬರುವಳು
ಸಂತೆಯ ಗದ್ದಲದಲಿ ಹುಚ್ಚಿಯಂತೆ ಅಲೆಯುವಳು ನನಗಾಗಿ
ಅಕ್ಕರೆಯ ಸಕ್ಕರೆಯ ಪಿಸುಮಾತಿನಲಿ ಕಳೆದೆವು ಯೌವನವ
ಅಂದು ಆಡಿದ ಮಾತುಗಳ ಮೌನದಲಿ ಹುಡುಕುವಳು ನನಗಾಗಿ
ಹೊಲದ ಬದುವಿಗುಂಟ ಹಬ್ಬಿದ ಬಳ್ಳಿ ಅರಳಿಸಿದೆ ಕುಸುಮಗಳ
ಸೆರಗಿಗೆ ಅಂಟಿದ ಕಂಪು ಹಾದಿಗೆ ಹರಡಿರುವಳು ನನಗಾಗಿ
ಅದುಮುವಳು ಮನದಲಿ ಏಳುವ ಒಲವ ಮಿಲನದ ಭಾವನೆಗಳನು
“ಪ್ರಭೆ”ಯು ನೆನಪ ಬುತ್ತಿಯಲಿ ಗಜಲ್ ಗಳ ಕಟ್ಟುವಳು ನನಗಾಗಿ
-ಪ್ರಭಾವತಿ ಎಸ್ ದೇಸಾಯಿ
ವಿಜಯಪುರ