ಗಜ಼ಲ್
ಅಂಬರ ಚುಂಬಿತ ಆಶೆಯ ಕುದುರೆಗೆ ರೆಕ್ಕೆಯ ಬರೆದವ ನೀನೇ ಸಖಾ
ಸುಂದರ ಎನ್ನುತ ಪ್ರೀತಿಯ ಕನಸಿಗೆ ನನ್ನನು ಕರೆದವ ನೀನೇ ಸಖಾ
ಕಾಣದ ಸುಖವನು ಮಡಿಲಿಗೆ ಸುರುವುತ ಮರೆಸಿದೆ ಲೋಕದ ದುಃಖವನು
ಕಂದರ ಕುಳಿಯಲಿ ಕತ್ತಲೆ ಕವಿಯಲು ಬಿದಿಗೆಯ ಸುರಿದವ ನೀನೇ ಸಖಾ
ಒಲವಿನ ಬೇಲಿಯ ಬೆಳಕಿಗೆ ಹೊಸೆಯುತ ಹೊಸಲಿನ ಒಳಗೆ ಇರಿಸಿದೆ ನೀ
ಹಸಿರು ಹಂದರದಲಿ ಹೊಸಬಾಳಿನ ಕದವನು ಮೋದದಿ ತೆರೆದವ ನೀನೇ ಸಖಾ
ಹಾಸಲು ಹೊದೆಯಲು ಬಿಸುಪಿನ ಎದೆಯನು ಹರುವಿದ ಪ್ರಿಯತಮ ನನ್ನವನು
ಕುಸಿಯದ ಕಂಬವ ವಿಶ್ವಾಸದಿ ಕಟ್ಟುತ ಮನಸನು ಅರಿತವ ನೀನೇ ಸಖಾ
ಹಸುಬೆಯ ಬಂಧಕೆ ಪಿಸುಕುವ ಭಯದಲಿ ತೋರದು ಏನೂ ಸಾಧನವು
ಕರುಬಿದ ಕರುಳಿಗೆ ಮನವರಿಕೆಯ ಮಾಡುತ ಮದ್ದನು ಅರೆದವ ನೀನೇ ಸಖಾ
ಹಲವು ಸಂವಸ್ತರ ಮರೆಸಿತು ಪ್ರೇಮವು ಇಷ್ಟೇ ಇಷ್ಟು ಗಳಿಗೆಯಲಿ
ಹುದುಗಿದ ತುಡಿತಕೆ ಸರಿಗಮವನು ಕಲಿಸಿ ಸುಧೆಯನು ಎರೆದವ ನೀನೇ ಸಖಾ
ಅರಿಯದ ಜಗದಲಿ ಅಡಿಗಳನಿಡಿಸಿ ನೀಳ್ತೋಳಲಿ ನನ್ನನು ಬಂಧಿಸಿದೆ
ಉರಿಯುವ ದೀಪದ ಸುತ್ತಲು ಸುಳಿಯುತ ಶಮೆಯಲಿ ಬೆರೆತವ ನೀನೇ ಸಖಾ
-ಶಮಾ. ಜಮಾದಾರ.